ಬಾಪ್, ಫ್ರಾಂಸ್
1791-1867. ಜರ್ಮನ್ ಭಾಷಾಶಾಸ್ತ್ರಜ್ಞ. ತುಲನಾತ್ಮಕ ಭಾಷಾಶಾಸ್ತ್ರದ ಅಧ್ವರ್ಯು. ಹುಟ್ಟಿದ್ದು ಸೆಪ್ಟೆಂಬರ್ 14 ರಂದು ಪೂರ್ವಜರ್ಮನಿಯಲ್ಲಿ. ಚಿಕ್ಕಂದಿನಿಂದಲೇ ಭಾಷಾಧ್ಯಯನದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಕೆಲವುಕಾಲ ಪ್ಯಾರಿಸ್ಸಿನಲ್ಲಿ ಸಂಸ್ಕøತವನ್ನು ಆಳವಾಗಿ ಅಧ್ಯಯನ ಮಾಡಿದ. ಆಗ ಸಂಸ್ಕøತವೇ ಗ್ರೀಕ್, ಲ್ಯಾಟಿನ್ ಮುಂತಾದ ಭಾಷೆಗಳಿಗೆ ಮೂಲವೆಂಬ ಭಾವನೆ ಅನೇಕ ವಿದ್ವಾಂಸರಿಗಿತ್ತು. ಈ ಅಭಿಪ್ರಾಯವನ್ನು ತಳ್ಳ್ಳಿಹಾಕಿ ಅಧ್ಯಯನವನ್ನು ಮುಂದುವರಿಸಿದ. ಇವನ ಮೊದಲ ಪ್ರಸಿದ್ಧ ಕೃತಿ ಆನ್ ದಿ ಸಿಸ್ಟಮ್ ಆಫ್ ಕಾನ್ಜುಗೇಷನ್ ಇನ್ ಸ್ಯಾನ್ಸ್‍ಕ್ರಿಟ್ 1816ರಲ್ಲಿ ಪ್ರಕಟವಾಯಿತು. 1821ರಿಂದ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಪ್ರಾಚ್ಯ ಸಾಹಿತ್ಯ ಮತ್ತು ಸಾಮಾನ್ಯ ಭಾಷಾಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ. 1827ರಲ್ಲಿ ಸಂಸ್ಕøತ ವ್ಯಾಕರಣ ಮತ್ತು 1830ರಲ್ಲಿ ಸಂಸ್ಕøತ ಮತ್ತು ಲ್ಯಾಟಿನ್ ಭಾಷೆಗಳ ಶಬ್ದಕೋಶ ಎನ್ನುವ ಇವನ ಎರಡು ಕೃತಿಗಳು ಪ್ರಕಟವಾದುವು. 1840ರಲ್ಲಿ ಮಲಯೋ-ಪಾಲಿನೇಷನ್ ಮತ್ತು ಇಂಡೋ ಯೂರೊಪಿಯನ್ ಭಾಷೆಗಳನ್ನು ಅಭ್ಯಸಿಸಿ ಲೇಖನಗಳನ್ನು ಪ್ರಕಟಿಸಿದ. ಪ್ರಪ್ರಥಮಬಾರಿ ಸಂಸ್ಕøತ, ಗ್ರೀಕ್, ಲ್ಯಾಟಿನ್, ಪರ್ಷಿಯನ್, ಜರ್ಮನ್ ಭಾಷೆಗಳ ತೌಲನಿಕ ಅಧ್ಯಯನ ಮಾಡಿದ ಕೀರ್ತಿ ಇವನದು. ಆಳವಾದ ಸಂಶೋಧನೆ ಮತ್ತು ಪರಿಶ್ರಮದ ಫಲವಾಗಿ ಇವನ ಪ್ರಸಿದ್ಧ ಕೃತಿ ಸಂಸ್ಕøತ, eóÉಂಡ್, ಗ್ರೀಕ್, ಲ್ಯಾಟಿನ್, ಲಿತುಯೇನಿಯನ್, ಗಾತಿಕ್ ಮತ್ತು ಜರ್ಮನ್ ಭಾಷೆಗಳ ತೌಲನಿಕ ವ್ಯಾಕರಣದ ಪ್ರಥಮ ಸಂಪುಟ 1853ರಲ್ಲೂ ಉಳಿದ ಎರಡು ಸಂಪುಟಗಳು 1857 ಮತ್ತು 1868ರಲ್ಲೂ ಪ್ರಕಟವಾದುವು. ಹಳೆಯ ಸ್ಲಾವಿಕ್, ಸೆಲ್‍ಟಿಕ್ ಮತ್ತು ಅಲ್‍ಬೇನಿಯನ್ ಭಾಷೆಗಳ ತೌಲನಿಕ ವಿಶ್ಲೇಷಣೆಯನ್ನೂ ಈತ ಕೆಲವು ಸಂಪುಟಗಳಲ್ಲಿ ಪ್ರಕಟಿಸಿದ. ಆಕೃತಿಮಾಶಾಸ್ತ್ರದ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಈತ ರಾಸ್‍ಮಸ್ ಕ್ರಿಶ್ಚನ್‍ರಾಸ್ಕ್ ಮತ್ತು ಗ್ರಿಮ್ ಅವರಂತೆ ಕೇವಲ ಧ್ವನಿವ್ಯತ್ಯಾಸವನ್ನಷ್ಟೇ ಅಭ್ಯಸಿಸದೆ ಶಬ್ದಗಳ ರಚನೆ, ಆಖ್ಯಾತ ಪ್ರತ್ಯಯಗಳು ಮತ್ತು ಶಬ್ದಗಳ ಮೂಲರಚನೆ ಅವುಗಳ ಅರ್ಥ ಇವಕ್ಕೂ ಆದ್ಯತೆ ನೀಡಿದ. ಸಂಸ್ಕøತ ಮತ್ತು ಗ್ರೀಕ್ ಭಾಷೆಗಳ ಉಚ್ಚಾರಣೆಯನ್ನು ಕುರಿತ ಇವನ ಲೇಖನ 1854ರಲ್ಲಿ ಪ್ರಕಟವಾಯಿತು. 1867ರ ಅಕ್ಟೋಬರ್ 23ರಂದು ಈತ ಬರ್ಲಿನ್ನಿನಲ್ಲಿ ಅಸು ನೀಗಿದ. 			(ಎಚ್.ಎಂ.ಎಂ.; ಎಸ್.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ